ಗಡಿಯಲ್ಲಿ ಭಾಷೆ ಅಭಿವೃದ್ಧಿಗೆ ಸ್ಥಳಿಯ ಜನರ ಸಹಕಾರ ಅಗತ್ಯ ಇದೆ ಡಿ.ಸಿ.ಮಂಜುನಾಥ್

ಕೋಲಾರ: ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಅಭಿವೃದ್ಧಿಪಡಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಇದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಲಹೆ ನೀಡಿದರು.
ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿ ಉದ್ಘಾಟಿಸಿ ಮಾತನಾಡಿ, ನಾನು ಜಿಲ್ಲಾಧಿಕಾರಿಗಿಂತ ಹೆಚ್ಚಾಗಿ ಓರ್ವ ಕನ್ನಡಿಗನಾಗಿ ಕನ್ನಡದ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೊತ್ಸಾಹ ಮತ್ತು ಸಹಕಾರ ನೀಡಲಾಗುವುದು ಎಂದು ಘೋಷಿಸಿದರು.
ಗಡಿ ಭಾಗದ ಜಿಲ್ಲೆ ಕೋಲಾರದಲ್ಲಿ ಅನೇಕ ಕನ್ನಡ ಪರ ಸಂಘಟನೆಗಳು ಕನ್ನಡಕ್ಕಾಗಿ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ. ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ ನಿವೇಶನಕ್ಕಾಗಿ ಮನವಿ ಮಾಡಿದ್ದು, ಜಾಗವನ್ನು ಗುರುತಿಸಿ ತಿಳಿಸಿದಲ್ಲಿ ಪರಿಶೀಲಿಸಿ ಮಂಜೂರು ಮಾಡುತ್ತೇನೆ, ಗಡಿಭಾಗದ ಕನ್ನಡ ಅಭಿವೃದ್ದಿಗೆ ಗಡಿ ಪ್ರಾಧಿಕಾರದಿಂದ ಅನುದಾನ ಮಂಜೂರು ಮಾಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಾನಂದ್ ಕೆಂಪರಾಜ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿ 105 ವರ್ಷಗಳಾಗಿದೆ, ಜಿಲ್ಲೆಯಲ್ಲಿ 10 ಸಾವಿರ ಸದಸ್ಯರನ್ನು ಹೊಂದಿದೆ ಎಂದರು.

ನಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಹೋಬಳಿ, ನಗರ ಘಟಕಗಳನ್ನು ಸ್ಥಾಪಿಸಿ ಸಮ್ಮೇಳನಗಳ ಮೂಲಕ ಕನ್ನಡ ಅಭಿವೃದ್ಧಿ ಶ್ರಮಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಸಹಕಾರದಿಂದ ಪರಿಷತ್ತಿಗೆ ಹೆಚ್ಚಿನ ಬಲ ಬಂದಂತಾಗಿದೆ. ಡಿವಿಜಿ ಅವರ ಮಂಕುತಿಮ್ಮನಕಗ್ಗದ 75ನೇ ವರ್ಷದ ಸಂಭ್ರದ 100 ದಿನದ ಕಾರ್ಯಕ್ರಮವನ್ನು ಶಾಲಾ ಕಾಲೇಜುಗಳಲ್ಲಿ ಯಶಸ್ವಿಯಾಗಿ ನಡೆಸಿದೆ. ಜತೆಗೆ ಜಿಲ್ಲೆಯಲ್ಲಿ ಪ್ರಥಮವಾಗಿ ದಲಿತ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಿದೆ. ಇದಕ್ಕೆ ನಮ್ಮ ಜಿಲ್ಲಾಧಿಕಾರಿ ಮಂಜುನಾಥ್ ಪ್ರತಿಯೊಂದು ಹಂತದಲ್ಲೂ ಸಹಕಾರ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದರು.
ಜಿಲ್ಲಾಕೇಂದ್ರದಲ್ಲಿ ಪರಿಷತ್ ಭವನ ನಿರ್ಮಾಣಕ್ಕಾಗಿ ಜಿಲ್ಲಾಡಳಿತದಿಂದ ನಿವೇಶನ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಪರಿಷತ್ತಿನ ನಿಟಕ ಪೂರ್ವ ಅಧ್ಯಕ್ಷ ಪ್ರಹ್ಲಾದರಾವ್ ಮಾತನಾಡಿ ಕಸಾಪ ಕಚೇರಿಗೆ ನಿವೇಶನ ಮಂಜೂರು ಮಾಡಲು ಅನೇಕ ಬಾರಿ ನಗರಸಭೆ ಪೌರಾಯುಕ್ತರಿಗೆ ಮತ್ತು ತಹಸೀಲ್ದಾರ್ ಅವರಿಗೆ ಮನವಿ ಪತ್ರಗಳನ್ನು ನೀಡಲಾಗಿತ್ತು, ಅದರೆ ಯಾವೂದೇ ಪ್ರಯೋಜನವಾಗಿಲ್ಲ. ಯಾವ ಅಧಿಕಾರಿಯೂ ಸ್ಪಂದಿಸಲಿಲ್ಲ ಎಂದು ವಿಷಾಧಿಸಿದ ಅವರು,ಅಧಿಕಾರಿಗಳಿಗೂ ಕನ್ನಡ ಪರ ಕಾಳಾಜಿ ಹೊಂದಿ ಸ್ಪಂದಿಸಿದರೆ ಮಾತ್ರ ಕಸಾಪ ಸ್ವಂತ ಕಟ್ಟಡ ಹೊಂದಲು ಸಾಧ್ಯ ಎಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ಆಶೋಕ್, ಕನ್ನಡಪರ ಹೋರಾಟಗಾರ ಅ.ಕೃ.ಸೋಮಶೇಖರ್, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರವಿಕುಮಾರ್, ಉಪನ್ಯಾಸಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಕೆ.ನಟರಾಜ್, ರಾಮಪ್ರಸಾದ್ ಹಾಜರಿದ್ದರು.

Leave a Reply

Your email address will not be published. Required fields are marked *

Don`t copy text!