ಬೆಂಗಳೂರಿನಲ್ಲಿ ಶಿವಕುಮಾರ್ ಪರ ಒಕ್ಕಲಿಗರ ಶಕ್ತಿ ಪ್ರದರ್ಶನ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯ(ಈಡಿ) ಬಂಧಿಸಿರುವುದನ್ನು ವಿರೋಧಿಸಿ ಬುಧವಾರ ಬೆಂಗಳೂರು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಒಕ್ಕಲಿಗರ ಶಕ್ತಿ ಪ್ರದರ್ಶನ ಮಾಡಿದರು.

ನಾನಾ ಒಕ್ಕಲಿಗ ಸಂಘಟನೆಗಳು ಬೆಂಗಳೂರು ನಗರದಲ್ಲಿ ನಡೆದ ಶಕ್ತಿ ಪ್ರದರ್ಶನದಲ್ಲಿ ಪಾಲ್ಗೋಂಡಿದ್ದವು. ಈ ಪ್ರತಿಭಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದವು. ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದ ನಿಯೋಗ ಶಿವಕುಮಾರ್ ವಿರುದ್ಧ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ದುರುದ್ದೇಶದ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿವಿಧ ಸಂಘಟನೆಗಳ ಜೊತೆಗೂಡಿ ಕಾಂಗ್ರೆಸ್, ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಿದರೆ, ಇತ್ತ ಒಕ್ಕಲಿಗ ಸಂಘದ ಸಾವಿರಾರು ಸಂಖ್ಯೆಯ ಡಿ.ಕೆ.ಶಿವಕುಮಾರ್ ಬೆಂಬಲಿಗರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನೆರೆದಿದ್ದ ಸಾವಿರಾರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಲವು ಸಂಘಟನೆಗಳ ನಾಯಕರು, ಡಿ ಕೆ ಶಿವಕುಮಾರ್‌ ಅವರನ್ನು ರಾಜಕೀಯವಾಗಿ ಎದುರಿಸಲಾಗದೆ ಕೇಂದ್ರ ಸರಕಾರ ಹೇಡಿಗಳಂತೆ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯವನ್ನು ಚೂ ಬಿಡುತ್ತಿದೆ. ಇಂದು ಐಟಿ, ಇಡಿ ಇಲಾಖೆ ಎಂದರೆ ಬಿಜೆಪಿಯ ಸೀಳು ನಾಯಿಗಳಾಗಿವೆ ಎಂದು ಕಿಡಿಕಾರಿದರು.
ಕೇಂದ್ರ ಸರಕಾರದ ನಿರ್ದೇಶನದಂತೆ ತನಿಖಾ ಸಂಸ್ಥೆಗಳ ಮೂಲಕ ಒಕ್ಕಲಿಗ ಸಮುದಾಯದ ಮುಖಂಡರನ್ನು ಬಲಿ ಹಾಕುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿ ವಿಶ್ವ ಒಕ್ಕಲಿಗರ ಮಹಾ ವೇದಿಕೆ ಮುಖಂಡರು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ.
ರಾಜಭವನದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿದ ನಿಯೋಗ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೈಗೊಂಡ ಹಕ್ಕೋತ್ತಾಯವನ್ನು ಗಮನಕ್ಕೆ ತಂದಿದ್ದಾರೆ. ಐಟಿ, ಇಡಿ, ಸಿಬಿಐ ತನಿಖಾ ಸಂಸ್ಥೆಗಳ ಮೂಲಕ ಒಕ್ಕಲಿಗ ಸಮುದಾಯದ ಧುರೀಣರನ್ನು ನಾಶಗೊಳಿಸುವ ದೊಡ್ಡ ಮಟ್ಟದ ಪಿತೂರಿಯೊಂದು ನಡೆಯುತ್ತಿದೆ ಎಂದು ನಿಯೋಗ ಆರೋಪಿಸಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಪೋನ್ ಕದ್ದಾಳಿಕೆಯ ಸುಳ್ಳು ಆರೋಪ ಹೊರಿಸಿ ಸಿಬಿಐ ತನಿಖೆಗೆ ಆದೇಶ ಹೊರಡಿಸಲಾಗಿದೆ. ಕಾಫಿ ಡೇ ಮಾಲಿಕ ಸಿದ್ದಾರ್ಥ ಅವರಿಗೆ ಐಟಿ ಇಲಾಖೆ ಕಿರುಕುಳ ನೀಡಿದ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಅವರ ವಿರುದ್ಧ ಜಾರಿ ನಿರ್ದೇಶನಾಲಯದ ಬಂಧನ ಮಾಡುವ ಮೂಲಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಎಲ್ಲಾ ಪ್ರಕರಣಗಳನ್ನು ಗಮನಿಸಿದರೆ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ಕೇಂದ್ರೀಯ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ಮಾಡುತ್ತಿವೆ. ಇದು ಮುಂದುವರಿದರೆ ರಾಜ್ಯಾದ್ಯಂತ ಚಳುವಳಿ ವಿಸ್ತರಣೆ ಮಾಡಬೇಕಾಗುತ್ತದೆ. ಇದರಿಂದಾಗುವ ಪರಿಣಾಮಕ್ಕೆ ಸರಕಾರವೇ ಹೊಣೆ ಎಂದು ರಾಜ್ಯಪಾಲರಿಗೆ ನೀಡಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹುಲಿಯನ್ನು ಬೋನಿಗೆ ಹಾಕಿದ್ರು ಹುಲಿನೇ. ನಂಜಾವಧೂತ ಸ್ವಾಮೀಜಿ
ಹುಲಿ ಹುಲಿನೇ… ಬೋನಿಗೆ ಹಾಕಿದ್ರೂ ಹುಲಿನೆ, ಪಂಜರಕ್ಕೆ ಹಾಕಿದ್ರೆನೂ ಹುಲಿನೆ, ಹೊರಗೆ ಬಿಟ್ರೆನೂ ಹುಲಿನೇ… ಆದ್ರೆ ಇತ್ತೀಚೆಗೆ ಈ ಹುಲಿಗೆ ಸ್ವಲ್ಪ ಸಂಸ್ಕಾರ ಜಾಸ್ತಿಯಾಗಿ ಸೌಮ್ಯವಾಗಿದೆ. ಈ ಸಂಸ್ಕಾರನೇ ದೌರ್ಬಲ್ಯ ಎಂದುಕೊಂಡು ಕೆಲವೊಂದು ಪ್ರಕ್ರಿಯೆಗಳು ಹೀಗೆ ನಡೆಯುತ್ತಿದೆ. ಹೀಗಂದೆ ಶಿವಕುಮಾರ್‌ ಅವರನ್ನು ಹುಲಿಗೆ ಹೋಲಿಸಿದ್ದಾರೆ ಗುರುಗುಂಡಾ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ
ಮೋದಿ ಪ್ರಭಲ ನಾಯಕ, ನಿರಂಕುಶ ಪ್ರಭುತ್ವ ಬೇಡ
ನರೇಂದ್ರ ಮೋದಿಯವರ ಕೆಲಸದ ಬಗ್ಗೆ ಆಡಳಿತದ ಬಗ್ಗೆ ಗೌವರವ ಇದೆ ಎಂದ ಸ್ವಾಮಿಜಿ, ಮೋದಿಯವರು ಈ ದೇಶದ ಏಕತೆಗಾಗಿ, ಆಂತರಿಕ ಭದ್ರತೆ ವಿಷಯವಾಗಿ ದೇಶ ಮೆಚ್ಚುವಂಥ ಕೆಲಸ ಮಾಡುತ್ತಿದ್ದಾರೆ. ವಿಶ್ವದಾದ್ಯಂತ ಪ್ರಬಲ ನಾಯಕ ಎಂಬ ಹೆಸರು ಗಳಿಸಿದ್ದಾರೆ ಆದರೆ “ಯಾರೂ ಕೂಡ ನಿರಂಕುಶ ಪ್ರಭುತ್ವ ಆಗಬಾರದು. ಧ್ವನಿಗಳನ್ನು ಬಗ್ಗು ಬಡಿಯವಂತ ಕೆಲಸ ಯಾರಿಂದಲಾದರೂ ಆದಾಗ, ಅದು ಈ ದೇಶದ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವರದಿ.ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!