ಸರ್ಕಾರಿ ಕೆಲಸ ಮಾಡಿಕೊಡಲು ಹಣ ಕೇಳಿದರೆ ಎ.ಸಿ.ಬಿ.ಗೆ ದೂರು ನೀಡಿ

ಕೋಲಾರ: ಇಲ್ಲಿನ ಟಿ.ಚನ್ನಯ್ಯ ರಂಗಮಂದಿರದಲ್ಲಿ ಎಸಿಬಿ ವತಿಯಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಜಾಗೃತಿ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅಂಗವಿಕಲರು, ಸಾರ್ವಜನಿಕರು, ರೈತರು ಹಗೂ ವಿವಿಧ ಸಂಘಸಂಸ್ಥೆಗಳ ಮುಖಂಡರು ದೂರು ನೀಡಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದ ಖಾತೆ ಬಲದಾವಣೆ, ಪಹಣಿ ವಿತರಣೆ, ತಿದ್ದುಪಡಿ, ಪಿ ನಂಬರ್ ಬದಲಾವಣೆ, ಪಾವತಿ ಖಾತೆ, ಸವೇ, ಮೂಲ ದಾಖಲೆ ವಿತರಣೆ, ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಸಲ್ಲಿಕೆಯಾಗಿದ್ದು, ಪಿಂಚಣಿ, ಮಾಶಾಸನ ಅರ್ಜಿ ವಿಲೇವಾರಿ ಅಗದೆ ಇರುವ ಬಗ್ಗೆ ದೂರು ಸಲ್ಲಿಕೆಯಾಗಿವೆ.
ಭ್ರಷ್ಟ ಮುಕ್ತ ಸಮಾಜ ನಿರ್ಮಾಣಕ್ಕೆ ಲೋಕಾಯುಕ್ತ, ಪೊಲೀಸ್ ಸೇರಿದಂತೆ ಸಾರ್ವಜನಿಕರು ಸಹಕಾರ ನೀಡಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಎಸಿಬಿ ಕೇಂದ್ರ ವಲಯ ಎಸ್ಪಿ ಎ.ಆರ್. ಬಡಿಗೇರ್ ಕೋರಿದರು.
ಗ್ರಾಪಂ, ತಾಲೂಕು ಕಚೇರಿ,ಆರ್‍ಟಿಒ, ಆಸ್ಪತ್ರೆ ಇನ್ನಿತರೆ ಸರ್ಕಾರಿ ಕಚೇರಿಗಳಿಗೆ ನಾಗರಿಕರು ಹೋದಾಗ ಸರ್ಕಾರಿ ನೌಕರರು ಕೆಲಸಕ್ಕೆ ಹಣದ ಬೇಡಿಕೆ ಇಡುತ್ತಾರೆ. ಇಂತಹವರನ್ನು ವಿಚಾರಿಸಿಕೊಳ್ಳಲು ನಾವಿದ್ದೇವೆ ಎಂದು ಧೈರ್ಯ ತುಂಬಿಸಿದರು.
ಭ್ರಷ್ಟಾಚಾರದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದ ಅವರು,ಕಾನೂನು ಚೌಕಟ್ಟಿನಲ್ಲಿ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣ ಕೇಳಿದರೆ ನಮ್ಮನ್ನು ಸಂಪರ್ಕಿಸಿ ಎಂದು ನುಡಿದರು.
ಎಲ್ಲ ಸರ್ಕಾರಿ ನೌಕರರು ಭ್ರಷ್ಟರಿರುವುದಿಲ್ಲ. ದಕ್ಷ ಅಧಿಕಾರಿಗಳು ಇದ್ದಾರೆ. ಎಲ್ಲೋ ಅಲ್ಲಲ್ಲ ಇರುವ ಭ್ರಷ್ಟರ ಬಗ್ಗೆ ದೂರು ನೀಡಲು ಮುಂದೆ ಬಂದವರಿಗೆ ನಾವು ಕಾನೂನು ರಕ್ಷಣೆ ನೀಡುತ್ತೇವೆ. ಈ ಮೂಲಕ ಭ್ರಷ್ಟಾಚಾರ ನಿರ್ಮೂಲನೆಗೆ ಮುಂದೆ ಬನ್ನಿ ಎಂದು ಕೋರಿದ ಅವರು, ಎಸಿಬಿಯ ಅಧಿಕಾರಿ ವರ್ಗದವರ ಮೇಲೂ ನಿಗಾ ಇಡಲು ವಿಜಿಲೆನ್ಸ್ ತಂಡ ಇರುವುದರಿಂದ ಯಾವುದೇ ಅನುಮಾನ ಬೇಡ ಎಂದರು.
ಎಸಿಬಿ ಡಿವೈಎಸ್ಪಿ ಎಂ.ಎಲ್.ಪುರುಷೋತ್ತಮ್ ಮಾತನಾಡಿ, ಜಿಲ್ಲೆಯಲ್ಲಿ 2016ರ ಮೇ 2ರಂದು ಕೋಲಾರದಲ್ಲಿ ಎಸಿಬಿ ಆರಂಭಗೊಂಡಿತು.ಅಂದಿನಿಂದ ಇಂದಿನವರೆಗೆ ಒಟ್ಟು 45 ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು ಲಂಚ ಸ್ವೀಕರಿಸಿ ಸಿಕ್ಕಿ ಬಿದ್ದಿರುವ 34 ಪ್ರಕರಣಗಳಿವೆ. ಬಿಸಿಎಂ ಜಿಲ್ಲಾ ಅಧಿಕಾರಿ 2 ಲಕ್ಷ ರೂ, 2017ರಲ್ಲಿ ಬಂಗಾರಪೇಟೆ ತಹಸೀಲ್ದಾರ್ 2 ಲಕ್ಷ ರೂ, 2018ರಲ್ಲಿ ಕೆಜಿಎಫ್ ಬಿಇಒ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿರುವ ಪ್ರಮುಖ ಪ್ರಕರಣಗಳಾಗಿವೆ ಎಂದು ಉದಾಹರಿಸಿದರು.
ಎಸಿಬಿ ಬಗ್ಗೆ ಗ್ರಾಮೀಣ ಮಟ್ಟದಲ್ಲೂ ಜಾಗೃತಿ ಮೂಡುತ್ತಿರುವುದರಿಂದ ಪ್ರತಿ ವರ್ಷವೂ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದ ಅವರು, ತಾಲೂಕು ಕೇಂದ್ರದಿಂದ ಗ್ರಾಪಂ ಮಟ್ಟದಲ್ಲಿ ಪ್ರತಿ ತಿಂಗಳು ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಸಭೆ ನಡೆಸಲಾಗುತ್ತಿದೆ. ಭ್ರಷ್ಟಾಚಾರ ಮುಕ್ತ ಕೋಲಾರದ ಕನಸು ಇದೆ, ಈ ದಿಸೆಯಲ್ಲಿ ಪ್ರಯತ್ನ ಶುರುವಾಗಿದೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ, ನೌಕರರು ಕೆಲಸ ಕಾರ್ಯಕ್ಕೆ ಸಣ್ಣ ಮೊತ್ತದ ಹಣ ಕೇಳಿದರೆ ಸಾರ್ವಜನಿಕರು ಕೆಲಸ ಮಾಡಿಸಿಕೊಂಡು ಹೋಗುತ್ತಾರೆ. ಜಾಸ್ತಿ ಹಣ ಇಲ್ಲವೇ ಹಿಂಸೆಯಾದರೆ ಮಾತ್ರ ದೂರು ನೀಡುವಂತಾಗಬಾರದು, ಮೊತ್ತ ಸಣ್ಣದಾದರೂ ಸರಿ ನೇರವಾಗಿ ದೂರು ನೀಡಬೇಕು ಎಂದು ಸಲಹೆ ನೀಡಿದರು.ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಕುರಿತು ಉಪನ್ಯಾಸ ನೀಡಿದ ಎಸಿಬಿ ವಿಶೇಷ ಸರ್ಕಾರಿ ಅಭಿಯೋಕ ಆರ್.ರಾಮಚಂದ್ರಯ್ಯ. ಜಗತ್ತಿನಲ್ಲಿ ಭ್ರಷ್ಟಾಚಾರ ಹೆಚ್ಚಿರುವ 176 ರಾಷ್ಟ್ರಗಳ ಪೈಕಿ ಭಾರತ 76ನೇ ಸ್ಥಾನದಲ್ಲಿದೆ. ಗಾಂಧೀಜಿ, ಅಂಬೇಡ್ಕರ್ ಹುಟ್ಟಿದ ಪುಣ್ಯಭೂಮಿಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವುದು ಅವಮಾನಕರ ಸಂಗತಿ. ಭ್ರಷ್ಟಾಚಾರ ನಿಯಂತ್ರಣಕ್ಕೆ ಯುವ ಪೀಳಿಗೆ ಮುಂದೆ ಬರಬೇಕು, ಎಸಿಬಿಗೆ ನಿಷ್ಠಾವಂತ ಅಧಿಕಾರಿಗಳನ್ನು ನೇಮಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.ಎಸಿಬಿಗೆ ದೂರು ನೀಡಿರುವ ಪ್ರಮುಖರಲ್ಲಿ ತೊಪ್ಪನಹಳ್ಳಿ ಮಲ್ಲಿಕಾರ್ಜುನ, ಧನಮಟ್ನಹಳ್ಳಿ ವೆಂಕಟೇಶಪ್ಪ, ಬಿಎಂಟಿಸಿ ನಿರ್ವಾಹಕಿ ಶೈಲಜಾ, ಜನಪನಹಳ್ಳಿಯ ರೈತ ರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಲೋಕಾಯುಕ್ತ  ಡಿವೈಎಸ್ಪಿ ಕೃಷ್ಣಮೂರ್ತಿ,  ಡಿವೈಎಸ್ಪಿಗಳಾದ ಕೋದಂಡರಾಮಯ್ಯ, ಉಮೇಶ್, ಅನುಷಾ, ಎಸಿಬಿ ಇನ್ಸ್‍ಪೆಕ್ಟರ್‍ಗಳಾದ ವೆಂಕಟಾಚಲಪತಿ ಇತರರಿದ್ದರು

ವರದಿ:ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!