ಶ್ರೀನಿವಾಸಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯ ಹೊರಗಿನ ಮಾವು ಮಂಡಿಗಳಿಗೆ ಕಡಿವಾಣ ಹಾಕಲು ತಿರ್ಮಾನ

ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವ ಶಿವಪ್ರಕಾಶ್

ಶ್ರೀನಿವಾಸಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಅಕ್ಕಪಕ್ಕ ನಿಯಮಬಾಹಿರವಾಗಿ ತಲೆ ಎತ್ತಿರುವ ಮಾವಿನ ಮಂಡಿಗಳನ್ನು ತೆರವುಗೊಳಿಸಲು ಕೃಷಿ ಮಾರಾಟ ಇಲಾಖೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
ಎಪಿಎಂಸಿ ಕಾಯಿದೆ ಜಾರಿ ಹಾಗೂ ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ಸಂಬಂಧ ಶ್ರೀನಿವಾಸಪುರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಮಾವು ಬೆಳೆಗಾರರ ಸಂಘದ ಪ್ರತಿನಿಧಿ ಎಂ.ಶಿವಪ್ರಕಾಶ್‌ ಮಾತನಾಡಿ, ‘ಎಪಿಎಂಸಿಗೆ ಹೊಂದಿಕೊಂಡಂತೆ ಸುತ್ತಮುತ್ತ ಖಾಸಗಿ ಮಂಡಿಗಳು ನಾಯಿಕೊಡೆಗಳಂತೆ ತಲೆಎತ್ತಿವೆ’ ಎಂದು ಕಿಡಿಕಾರಿದರು.
‘ಎಪಿಎಂಸಿಯಲ್ಲಿ ಮಾವಿನ ವಹಿವಾಟಿಗೆ ಪರವಾನಗಿ ಪಡೆದಿರುವ ಕೆಲ ಮಂಡಿ ಮಾಲೀಕರು ಹಾಗೂ ಏಜೆಂಟರು ನಿಯಮಬಾಹಿರವಾಗಿ ಹೊರಗಡೆ ಮಂಡಿಗಳನ್ನು ತೆರೆದಿದ್ದಾರೆ. ಮತ್ತೆ ಕೆಲವರು ಎಪಿಎಂಸಿ ಜಾಗವನ್ನು ಬೇರೆ ವ್ಯಕ್ತಿಗಳಿಗೆ ನೆಲ ಬಾಡಿಗೆಗೆ ನೀಡಿ ಬೇನಾಮಿ ಹೆಸರಿನಲ್ಲಿ ವಹಿವಾಟು ನಡೆಸುತ್ತಿದ್ದಾರೆ ಇದರಿಂದ ಅರ್ಹ ನೊಂದಾಯಿತ ವ್ಯಾಪಾರಸ್ಥರಿಗೆ ವಹಿವಾಟು ನಡೆಸಲು ಅನಕೂಲ ಇಲ್ಲವಾಗಿದೆ ಎಂದು ಆರೋಪಿಸಿದರು.
‘ಮಾರುಕಟ್ಟೆಯಲ್ಲಿ ಬಿಳಿ ಚೀಟಿ ದಂಧೆ ವ್ಯಾಪಕವಾಗಿದೆ. ಮಂಡಿ ಮಾಲೀಕರು ರಾತ್ರಿ ವೇಳೆ ಮಾವಿನ ಕಾಯಿಯ ಹರಾಜು ನಡೆಸುವ ಮೂಲಕ ತೂಕದಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಮಾರುಕಟ್ಟೆಯಲ್ಲಿನ ಕೆಳ ಹಂತದ ಸಿಬ್ಬಂದಿಗೆ ವಹಿವಾಟಿನ ಜ್ಞಾನವಿಲ್ಲ. ಬಹುತೇಕ ಸಿಬ್ಬಂದಿ ಹೋರಗುತ್ತಿದೆ ಅಧಾರದಲ್ಲಿ ಕೆಲಸ ಮಾಡುವರೆ ಸಂಖ್ಯೆ ಹೆಚ್ಚಾಗಿದೆ ಅವರು ಹಿರಿಯ ಅಧಿಕಾರಿಗಳ ಕೈಗೊಂಬೆಯಾಗಿರುವ ಸಿಬ್ಬಂದಿಯು ದಲ್ಲಾಳಿಗಳು ಮತ್ತು ಮಂಡಿ ಮಾಲೀಕರಿಂದ ಕಮಿಷನ್‌ ವಸೂಲು ಮಾಡುತ್ತಿದ್ದಾರೆ’ ಎಂದು ದೂರಿದರು. ‘ಏಜೆಂಟರು, ದಲ್ಲಾಳಿಗಳು, ಮಂಡಿ ಮಾಲೀಕರು ಹಾಗೂ ಮಾರುಕಟ್ಟೆ ಸಿಬ್ಬಂದಿಯು ಒಗ್ಗೂಡಿ ಕಮಿಷನ್‌ ಮಾಫಿಯಾ ನಡೆಸುತ್ತಿದ್ದಾರೆ. ಮಾರುಕಟ್ಟೆಗೆ ಮಾವಿನ ಕಾಯಿ ತೆಗೆದುಕೊಂಡು ಬರುವ ರೈತರಿಂದ ಶೇ 10ರಷ್ಟು ಕಮಿಷನ್‌ ಪಡೆಯಲಾಗುತ್ತಿದೆ. ರೈತರಿಗೆ ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಮಾರುಕಟ್ಟೆಯಲ್ಲಿ ಸೂಕ್ತ ಸೌಲಭ್ಯವಿಲ್ಲ. ಖಾಸಗಿ ಮಂಡಿಗಳ ಮೂಲಕ ಅಕ್ರಮವಾಗಿ ಮಾವಿನ ಕಾಯಿ ಖರೀದಿಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಡಿವಾಣ ಹಾಕುತ್ತಿಲ್ಲ: ‘ಜಿಲ್ಲೆಯಲ್ಲಿ ಸುಮಾರು 51,632 ಹೆಕ್ಟೇರ್‌ ಮಾವು ಬೆಳೆ ಇದ್ದು, ಈ ವರ್ಷ 3.25 ಲಕ್ಷ ಮೆಟ್ರಿಕ್‌ ಟನ್‌ ಫಸಲು ನಿರೀಕ್ಷಿಸಲಾಗಿದೆ. ಖಾಸಗಿ ಮಂಡಿ ಮಾಲೀಕರು ಎಪಿಎಂಸಿಯಲ್ಲಿ ವಹಿವಾಟು ಆರಂಭಕ್ಕೂ ಮುನ್ನವೇ ರೈತರಿಂದ ಕಡಿಮೆ ಬೆಲೆಗೆ ಮಾವು ಖರೀದಿಸಿ ಹೊರ ರಾಜ್ಯಗಳಿಗೆ ರಫ್ತು ಮಾಡುತ್ತಿದ್ದಾರೆ. ಎಪಿಎಂಸಿ ಅಧಿಕಾರಿಗಳಿಗೆ ಈ ಸಂಗತಿ ಗೊತ್ತಿದ್ದರೂ ಅಕ್ರಮಕ್ಕೆ ಕಡಿವಾಣ ಹಾಕುತ್ತಿಲ್ಲ’ ಎಂದು ಕಿಡಿಕಾರಿದರು.

ಜಿಲ್ಲೆಯಲ್ಲಿ ಮಾವು ಹಣ್ಣಿನ ಸಂರಕ್ಷಣೆಗೆ ಮತ್ತು ದಾಸ್ತಾನಿಗೆ ಸೂಕ್ತ ವ್ಯವಸ್ಥೆ ಇಲ್ಲ. ಮಾವಿನ ಉಪ ಉತ್ಪನ್ನ ಉತ್ಪಾದನಾ ಘಟಕಗಳಿಲ್ಲ. ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘವು (ಹಾಪ್‌ಕಾಮ್ಸ್) ರೈತ ಸೇವಾ ಸಹಕಾರ ಸಂಘಗಳಿಗೆ ಹಾಗೂ ಸ್ವವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸಿಲ್ಲ. ಮಾರುಕಟ್ಟೆ ವಿಚಕ್ಷಣ ದಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂಬೈನ ದೊಡ್ಡ ದೊಡ್ಡ ವ್ಯಾಪಾರಿಗಳು ಸ್ಥಳೀಯ ಮಾವು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿದ್ದಾರೆ. ಸ್ಥಳೀಯ ಮಂಡಿ ಮಾಲೀಕರು ರಾಜಕಾರಣಿಗಳ ಹಾಗೂ ಅಧಿಕಾರಿಗಳ ಬೆಂಬಲದಿಂದ ಮಾವು ಬೆಳೆಗಾರರನ್ನು ಶೋಷಣೆ ಮಾಡುತ್ತಿದ್ದಾರೆ.ಈ ಅಕ್ರಮದಿಂದ ಒಂದೆಡೆ ರೈತರಿಗೆ ಮೋಸವಾಗುತ್ತಿದೆ. ಮತ್ತೊಂದೆಡೆ ಎಪಿಎಂಸಿಗೆ ಆದಾಯ ಖೋತಾ ಆಗುತ್ತಿದೆ’ ಎಂದು ಹೇಳಿದರು.
ಹುದ್ದೆ ಖಾಲಿಯಿದೆ: ‘ಹೈಕೋರ್ಟ್‌ ಆದೇಶದಂತೆ ಮಾರುಕಟ್ಟೆಯಲ್ಲಿ ಪಾರದರ್ಶಕ ವಹಿವಾಟು ನಡೆಸಲು ಬದ್ಧರಾಗಿದ್ದೇವೆ. ಎಪಿಎಂಸಿ ಅಕ್ಕಪಕ್ಕ ಅಕ್ರಮವಾಗಿ ತಲೆಎತ್ತಿರುವ ಮಂಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಕಾರ್ಯದರ್ಶಿ ಹುದ್ದೆ ಹಲವು ವರ್ಷಗಳಿಂದ ಖಾಲಿಯಿದೆ’ ಎಂದು ಶ್ರೀನಿವಾಸಪುರ ಎಪಿಎಂಸಿ ಅಧ್ಯಕ್ಷ ರಾಜೇಂದ್ರಪ್ರಸಾದ್‌ ಅಸಹಾಯಕತೆ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಮಾರಾಟ ಇಲಾಖೆ ಹೆಚ್ಚುವರಿ ನಿರ್ದೇಶಕ (ಯೋಜನೆ) ಚಾಮರಾಜು, ‘ಮಾವಿನ ವಹಿವಾಟು ಮುಗಿಯುವವರೆಗೂ 3 ತಿಂಗಳ ಕಾಲ ಮಾರುಕಟ್ಟೆಗೆ ಕಾರ್ಯದರ್ಶಿ ನಿಯೋಜಿಸುತ್ತೇವೆ. ಹಿರಿಯ ಅಧಿಕಾರಿಗಳು ನಿಯಮಿತವಾಗಿ ಮಾವು ವಹಿವಾಟಿನ ಮೇಲ್ವಿಚಾರಣೆ ನಡೆಸುತ್ತಾರೆ’ ಎಂದು ಭರವಸೆ ನೀಡಿದರು.
ತೆರವುಗೊಳಿಸಿ:‘ಬೆಳಿಗ್ಗೆ ಮಾವು ಹರಾಜು ನಡೆಸುವ ಸಂಬಂಧ ಮಂಡಿ ಮಾಲೀಕರು ಹಾಗೂ ರೈತರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಿ. ಎಪಿಎಂಸಿ ಹೊರ ಭಾಗದಲ್ಲಿ ನಿಯಮಬಾಹಿರವಾಗಿ ನಡೆಯುತ್ತಿರುವ ಮಂಡಿಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿ ಮುಲಾಜಿಲ್ಲದೆ ತೆರವುಗೊಳಿಸಿ’ ಎಂದು ಸೂಚಿಸಿದರು.
ರೈತರ ವಿಶ್ರಾಂತಿಗೆ ಕೊಠಡಿ ಮೂಲಭೂತ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸುವುದು, ದರ ಪಟ್ಟಿ ನಮೂದು, ಕಮಿಷನ್‌ ದಂಧೆ ಮತ್ತು ತೂಕದಲ್ಲಿನ ಮೋಸ ತಡೆಗೆ ಹಾಗೂ ವಿವಾದ ಇತ್ಯರ್ಥ ಸಮಿತಿ ರಚನೆಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕೃಷಿ ಮಾರಾಟ ಇಲಾಖೆ ಹೆಚ್ಚುವರಿ ನಿರ್ದೇಶಕರಾದ ಶ್ರೀನಿವಾಸ್‌, ಅನಿಲಾಕುಮಾರಿ, ಜಂಟಿ ನಿರ್ದೇಶಕ ಸುನಿಲ್‌ಕುಮಾರ್‌, ಶ್ರೀನಿವಾಸಪುರ ಎಪಿಎಂಸಿ ಸದಸ್ಯೆ ರೂಪಾವತಿ, ಕಾರ್ಯದರ್ಶಿ (ಪ್ರಭಾರ) ಶ್ರೀನಿವಾಸ್‌ ಪಾಲ್ಗೊಂಡಿದ್ದರು.

ವಿವೇಕ್ ಎಸ್ ಶೆಟ್ಟಿ

Leave a Reply

Your email address will not be published. Required fields are marked *

Don`t copy text!