ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ಪ್ರಭಾವಿ ಕಾಂಗ್ರೆಸ್ ಮುಖಂಡ ಚಿದಂಬರಂ ಬಂಧನ

ಐಎನ್‌ಎಕ್ಸ್‌ ಮಾಧ್ಯಮ ಸಂಸ್ಥೆ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಬುಧವಾರ ರಾತ್ರಿ ಮಾಜಿ ಹಣಕಾಸು ಸಚಿವ ಪ್ರಭಾವಿ ಕಾಂಗ್ರೆಸ್ ಮುಖಂಡ,ರಾಜ್ಯಸಭ ಸದಸ್ಯ ಪಿ. ಚಿದಂಬರಂ ಬಂಧನವಾಗಿದೆ. ಕಾಕತಾಳಿಯ ಎಂಬುವಂತೆ ಅಂದು ಯುಪಿಎ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಯಾಗಿದ್ದ ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದಾಗ ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಅಂದಿನ ಗುಜರಾತ್‌ ರಾಜ್ಯ ಸರ್ಕಾರದ ಗೃಹ ಸಚಿವರಾಗಿದ್ದ ಅಮಿತ್‌ ಶಾ ಅವರನ್ನು ಬಂಧಿಸಲಾಗಿತ್ತು. ಬದಲಾದ ಕಾಲ ಘಟ್ಟದಲ್ಲಿ ಇಂದು ಅದೇ ಅಮಿತ್ ಶಾ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಗೃಹ ಸಚಿವರಾಗಿದ್ದಾರೆ!

ಬಂಧನದಲ್ಲಿರುವ ಚಿದಂಬರಂ ಅವರಿಗೆ ತಮ್ಮ ಹಿಂದಿನ ಎರಡು ಹಳೆಯ ಮುಖಗಳು ಕಾಡುವಂತಾಗಿದೆ. ಒಬ್ಬರು, ಹಾಲಿ ಗೃಹ ಸಚಿವರಾಗಿರುವ ಅಮಿತ್‌ ಶಾ ಅವರದ್ದಾಗಿದ್ದರೆ. ಮತ್ತೊಬ್ಬರು ಒಂದು ಕಾಲದಲ್ಲಿ ಚಿದು ಅಧೀನದಲ್ಲೇ ಕೆಲಸ ಮಾಡಿ ಮನಸ್ತಾಪ ಹೊಂದಿದ ಹಿನ್ನಲೆಯಲ್ಲಿ ಎತ್ತಂಗಡಿಯಾಗಿದ್ದ ಹಾಲಿ ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಎಸ್‌.ಕೆ. ಮಿಶ್ರಾ,
ಈ ಅಧಿಕಾರಿ ಚಿದಂಬರಂ ಅವರು ಗೃಹ ಸಚಿವರಾಗಿದ್ದಾಗ ಎಸ್‌.ಕೆ ಮಿಶ್ರಾ ಎಂಬ ಅಧಿಕಾರಿ ಗೃಹ ಇಲಾಖೆಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಚಿದು ಜತೆಗಿನ ವೈಮನಸ್ಯದಿಂದ ಮಿಶ್ರಾ ಅವರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಅದೇ ಮಿಶ್ರಾ ಈಗ ಐಎನ್‌ಎಕ್ಸ್‌ ಮಾಧ್ಯಮ ಸಂಸ್ಥೆ ಅವ್ಯವಹಾರ ಕುರಿತು ತನಿಖೆ ನಡೆಸುತ್ತಿರುವ ಹಾಗೂ ಚಿದಂಬರಂ ಅವರನ್ನು ಬಂಧಿಸಿದ ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿದ್ದಾರೆ.
2​014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂಧನವಾದ ಮೊದಲ ಹಿರಿಯ ಕಾಂಗ್ರೆಸ್ಸಿಗ ಚಿದಂಬರಂ ಅವರಾಗಿದ್ದಾರೆ.
2004ರಿಂದ 2014ರವರೆಗೆ ಅಧಿಕಾರ ನಡೆಸಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ 2ಜಿ, ಕಲ್ಲಿದ್ದಲು ಹಗರಣ ನಡೆಸಿದೆ ಎಂದು ಬಿಜೆಪಿ ಆರೋಪಿಸಿ ಅಧಿಕಾರಕ್ಕೇರಿತ್ತು. ಆದರೆ ಕಾಂಗ್ರೆಸ್ಸಿನ ಯಾವೊಬ್ಬ ನಾಯಕರನ್ನೂ ಬಂಧಿಸಲು ಆಗಿರಲಿಲ್ಲ. ಆದರೆ ಚಿದಂಬರಂ ಅವರು ಇದೀಗ ಯುಪಿಎ ಕಾಲದ ಹಗರಣವೊಂದರ ಸಂಬಂಧ ಬಂಧನಕ್ಕೆ ಒಳಗಾಗಿದ್ದಾರೆ. ತನ್ಮೂಲಕ ಮೋದಿ ಅವಧಿಯಲ್ಲಿ ಬಂಧಿತರಾದ ಮೊದಲ ಹಿರಿಯ ಕಾಂಗ್ರೆಸ್ಸಿಗರಾಗಿದ್ದಾರೆ.
2ಜಿ ಹಗರಣದಲ್ಲಿ ಆರೋಪಿಗಳಾಗಿ ಡಿಎಂಕೆಯ ಎ. ರಾಜಾ ಹಾಗೂ ಕನಿಮೋಳಿ ಅವರು ಜೈಲು ಸೇರಿದ್ದರು. ಯುಪಿಎ ಅವಧಿಯಲ್ಲೇ ಅವರ ಬಂಧನವಾಗಿತ್ತು. 2017ರಲ್ಲಿ ಅವರು ದೆಹಲಿ ಹೈಕೋರ್ಟ್‌ನಿಂದ ಖುಲಾಸೆಯಾಗಿದ್ದರು.
ಬಂಧನ ಭಿತಿಯಲ್ಲಿ 24 ಗಂಟೆಗಳ ಕಾಲ ನಾಪತ್ತೆಯಾಗಿದ್ದು ನಂತರ ಕಾಂಗ್ರೆಸ್ ಕಚೇರಿಯಲ್ಲಿ ಪ್ರತ್ಯಕ್ಷರಾಗಿದ್ದ ಚಿದಂಬರಂ ಅವರ ದೆಹಲಿ ನಿವಾಸಕ್ಕೆ ತೆರಳಿದ ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ಬಂಧಿಸಿದ್ದಾರೆ.
ಇಡಿ ಅಧಿಕಾರಿಗಳು ಪೊಲೀಸರ ನೆರವಿನಿಂದ ಚಿದಂಬರಂ ಅವರ ಮನೆಯನ್ನು ಪ್ರವೇಶಿಸಿದ್ದರು. ಈ ಳಿಕ ಚಿದಂಬರಂ ಅವರನ್ನು ಸಿಬಿಐ ನ ಕೇಂದ್ರ ಕಚೇರಿಗೆ ಕರೆದೊಯ್ದು, ವಾರೆಂಟ್ ನೀಡಿ ಅಧಿಕೃತವಾಗಿ ಬಂಧಿಸಿದ್ದಾರೆ. ಆ.22 ರಂದು ಚಿದಂಬರಂ ಅವರನ್ನು ಸಿಬಿಐ ನ್ಯಾಯಾಲಯದ ಎದುರು ಹಾಜರುಪಡಿಸುವ ಸಾಧ್ಯತೆ ಇರುವುದಾಗಿ ಹೇಳಲಾಗಿದೆ.
ಬಂಧನದ ವೇಳೆ ಹೈಡ್ರಾಮ
ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ವಶಕ್ಕೆ ಪಡೆಯುವುದಕ್ಕೂ ಮುನ್ನ ಹೈಡ್ರಾಮ ನಡೆದಿದೆ, ಸಿಬಿಐ ಅಧಿಕಾರಿಗಳು ಚಿದಂಬರಂ ಮನೆಗೆ ಪ್ರವೇಶಿಸಲು ಯತ್ನಿಸುತ್ತಿದ್ದಂತೆಯೇ ಗಲಾಟೆ ಪ್ರಾರಂಭವಾಗಿದ್ದು, ಪೊಲೀಸ್ ಅಧಿಕಾರಿಗಳ ನೆರವಿನಿಂದ ಸಿಬಿಐ ಅಧಿಕಾರಿಗಳು ಹಿಂಬಾಗಿಲಿನ ಮೂಲಕ ಚಿದಂಬರಂ ಮನೆ ಪ್ರವೇಶಿಸಿದ್ದಾರೆ. ಮನೆಗೆ ಪ್ರವೇಶಿಸುತ್ತಿದ್ದಂತೆಯೇ ಸಿಬಿಐ ವಕೀಲರ ನೇತೃತ್ವದಲ್ಲಿ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ ಚಿದಂಬರಂ ಅವರನ್ನು ವಶಕ್ಕೆ ಪಡೆದಿದ್ದಾರೆ.

ರಾಜಕೀಯ ಪ್ರೇರಿತ ಕಾರ್ತಿ ಚಿದಂಬರ.
ಇದೊಂದು ರಾಜಕೀಯ ಪ್ರೇರಿತ ಕುತಂತ್ರ ಎಂದು ಚಿದಂಬಂರಂ ಪುತ್ರ ಕಾರ್ತಿಚಿದಂಬರಂ ಆರೋಪಿಸಿದ್ದಾರೆ. ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತಮ್ಮ ತಂದೆ ಕೇಂದ್ರದ ಮಾಜಿ ಸಚಿವ ಪಿ ಚಿದಂಬಂರಂ ಅವರನ್ನು ಸಿಬಿಐ ಬಂಧಿಸಿರುವ ಕ್ರಮವನ್ನು ಖಂಡಿಸಿ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಸಂವಿಧಾನ ವಿಧಿ 370ನ್ನು ರದ್ದುಪಡಿಸಿರುವುದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡುತ್ತಿರುವ ಕುತಂತ್ರವಿದು. ಇಡೀ ಪ್ರಕರಣ ರಾಜಕೀಯ ಪ್ರೇರಿತ ಎಂದರು.

ಏನಿದು ಸೋಹ್ರಾಬುದ್ಧೀನ್ ಶೇಖ್ ಎನ್ ಕೌಂಟರ್.
ಸುಮಾರು 60 ಪ್ರಕರಣಗಳಲ್ಲಿ ಬೇಕಿದ್ದ ಕ್ರಿಮಿನಲ್ ಸೋಹ್ರಾನುದ್ಧೀನ್ ನ್ನು 2005 ರಲ್ಲಿ ಗುಜರಾತ್ ಪೊಲೀಸರು ಎನ್ ಕೌಂಟರ್ ಮಾಡಿದ್ದರು. ಅಮಿತ್ ಶಾ ಅನುಮತಿಯ ಮೇರೆಗೆ ಎನ್ ಕೌಂಟರ್ ಮಾಡಲಾಗಿತ್ತು, ಇದು ನಕಲಿ ಎನ್ ಕೌಂಟರ್ ಎಂಬ ಆರೋಪವಿದ್ದ ಪ್ರಕರಣವನ್ನು 2010 ರ ಜನವರಿಯಲ್ಲಿ ಸಿಬಿಐ ಗೆ ವಹಿಸಲಾಗಿತ್ತು. ಅಂದು ಕೇಂದ್ರದಲ್ಲಿ ಗೃಹ ಸಚಿವರಾಗಿದ್ದವರು ಇದೇ ಚಿದಂಬರಂ!
ಅಂದು ಗುಜರಾತ್ ನ ಗೃಹ ಸಚಿವರಾಗಿದ್ದ ಅಮಿತ್ ಶಾ ಅವರನ್ನು ಸಿಬಿಐ ಸೋಹ್ರಾಬುದ್ಧೀನ್ ಶೇಖ್ ಎನ್ ಕೌಂಟರ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಅಂದು ಚಿದಂಬರಂ ಕೇಂದ್ರದ ಗೃಹ ಸಚಿವರಾಗಿದ್ದವರು.10 ವರ್ಷಗಳ ಹಿಂದೆ ಯುಪಿಎ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದವರಿಗೆ ಇಂದು ಸಂಕಷ್ಟ ಎದುರಾಗಿದೆ. ಚಿದಂಬರಂ ಅವರ ಬಂಧನವನ್ನು ಕಾಂಗ್ರೆಸ್ ರಾಜಕೀಯ ದ್ವೇಷ ಎಂದು ಆರೋಪಿಸಿದೆ. ಇದೇ ರೀತಿಯ ಆರೋಪವನ್ನು 10 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಬಿಜೆಪಿ ಮಾಡಿತ್ತು.
2010 ರ ಜುಲೈ ನಲ್ಲಿ ಅಮಿತ್ ಶಾ ಅವರನ್ನು ಸಿಬಿಐ ಬಂಧಿಸಿ ಹತ್ಯೆಯ ಆರೋಪ ಪಟ್ಟಿ ದಾಖಲಿಸಿತ್ತು. ಅಮಿತ್ ಶಾ ಜಾಮೀನು ಅರ್ಜಿ ಸಲ್ಲಿಸಿದ್ದಾಗ ಗುಜರಾತ್ ಹೈಕೋರ್ಟ್ ನಲ್ಲಿ ಸಿಬಿಐ ವಿರೋಧಿಸಿತ್ತು. 3 ತಿಂಗಳ ನಂತರ 2010 ರ ಅಕ್ಟೋಬರ್ 29 ರಂದು ಅಮಿತ್ ಶಾಗೆ ಜಾಮೀನು ಮಂಜೂರಾಗಿತ್ತು. ಆದರೆ 2010-12 ರ ವರೆಗೆ ಗುಜರಾತ್ ಪ್ರವೇಶಿಸದಂತೆ ಅಮಿತ್ ಶಾಗೆ ಕೋರ್ಟ್ ಆದೇಶಿಸಿತ್ತು. ಅಂದು ಬಂಧನಕ್ಕೊಳಗಾಗಿದ್ದ ಅಮಿತ್ ಶಾ ಚಿದಂಬರಂ ಹಾಗೂ ಕಾಂಗ್ರೆಸ್ ವಿರುದ್ಧ ರಾಜಕೀಯ ವಿರೋಧಿಗಳನ್ನು ಟಾರ್ಗೆಟ್ ಮಾಡಲು ಸಿಬಿಐ ನ್ನು ಬಳಸಿಕೊಳ್ಳುತ್ತಿರುವ ಆರೋಪವನ್ನು ಬಿಜೆಪಿ ಮಾಡಿತ್ತು.

ತಾವೆ ಉದ್ಘಾಟಿಸಿದ ಸಿಬಿಐ ಕಛೇರಿಯಲ್ಲಿ ವಿಚಾರಣೆಗೆ ಒಳಪಡಿತ್ತಿರುವ ಮಾಜಿ ಮಂತ್ರಿ
ಚಿದಂಬರಂ ಅವರನ್ನು ಹೊಸದಿಲ್ಲಿಯ ಜೋರ್‌ಭಾಗ್‌ನಲ್ಲಿರುವ ಸಿಬಿಐ ಮುಖ್ಯ ಕಚೇರಿಯಲ್ಲಿ ವಿಚಾರಣೆಗೆ ಕರೆದೊಯ್ಯಲಾಗಿದೆ. ಬುಧವಾರ ಇಡೀ ರಾತ್ರಿ ಚಿದಂಬರಂ ಇಲ್ಲಿಯೇ ಕಳೆದಿದ್ದಾರೆ. ವಿಪರ್ಯಾಸ ಎಂದರೆ ಇದೇ ಮುಖ್ಯ ಕಚೇರಿಯ ಕಟ್ಟಡವನ್ನು ಉದ್ಘಾಟಿಸಿದ್ದೇ ಚಿದಂಬರಂ. 2011ರಲ್ಲಿ ಈ ಕಚೇರಿಯನ್ನು ಚಿದಂಬರಂ ಉದ್ಘಾಟಿಸಿದ್ದರು. ಈಗ ಅದೇ ಕಟ್ಟಡದಲ್ಲಿ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸುತ್ತಿದ್ದಾರೆ.

ಸುದ್ಧಿಸಂಗ್ರಹ:-ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!