ಮಹಿಳಾ ಸ್ವಸಾಹಾಯ ಸಂಘಗಳಿಗೆ ಕೋಲಾರ ಡಿಸಿಸಿ ಬ್ಯಾಂಕಿನಿಂದ ಸಾಲ ವಿತರಣೆ.

ಕೋಲಾರ:-ಚುನಾವಣೆಗೆ ಮುನ್ನ ಹೇಳಿರುವಂತೆಯೇ ಪ್ರತಿ ಸ್ವಸಹಾಯ ಸಂಘಕ್ಕೂ 10 ಲಕ್ಷರೂ ಸಾಲವನ್ನು ನೀಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಸ್ಪೀಕರ್ ರಮೇಶ್‍ಕುಮಾರ್ ಹೇಳಿದರು.
ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ತೊಟ್ಲಿ ಗ್ರಾಮದಲ್ಲಿ ಭಾನುವಾರ ಡಿಸಿಸಿ ಬ್ಯಾಂಕ್ ವತಿಯಿಂದ ನಡೆದ ಸುಗಟೂರು ಹೋಬಳಿಯ 186 ಸ್ವಸಹಾಯ ಸಂಘಗಳಿಗೆ ಹತ್ತು ಕೋಟಿರೂ ಸಾಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸದ್ಯಕ್ಕೆ ಪ್ರತಿ ಸಂಘಕ್ಕೂ 5 ಲಕ್ಷರೂಗಳನ್ನು ನೀಡಲಾಗುತ್ತದೆ. ಸುಮಾರು ಹತ್ತು ದಿನಗಳ ನಂತರ ಉಳಿದ 5 ಲಕ್ಷರೂಗಳನ್ನು ತಲುಪಿಸುತ್ತೇವೆ. ಎಂದ ಅವರು ಪ್ರಾಣಹೋದರೂ ತಲೆ ತಗ್ಗಿಸುವುದಿಲ್ಲ, ನಿಮ್ಮ ವಿಶ್ವಾಸ ಕಳೆದುಕೊಳ್ಳುವುದಿಲ್ಲ ಎಂದರು. ನನ್ನ ಮತ್ತು ಬ್ಯಾಂಕಿನ ಬಗ್ಗೆ ಅನೇಕರು ಅನೇಕ ರೀತಿಯ ಮಾತುಗಳನ್ನು ಆಡುತ್ತಿದ್ದಾರೆ. ಇನ್ನೂ ಕೆಲ ಪಾಳೇಗಾರರು ಇಲ್ಲಸಲ್ಲದ ವಿಚಾರಗಳನ್ನು ಹರಡುತ್ತಿದ್ದಾರೆ ಜನರು ಹಣ ವಾಪಸ್ಸು ಕಟ್ಟುವುದಿಲ್ಲ ಎಂದು ಕಿವಿಚುಚ್ಚುತ್ತಿದ್ದಾರೆ. ಅವರ್ಯಾರು ಹೊಟ್ಟೆಗೆ ಅನ್ನ ತಿನ್ನುವುದಿಲ್ಲ, ಅವರಿಗೆ ಜವಾಬ್ದಾರಿ ಅನ್ನುವುದು ಎಂದು ಆಕ್ರೋಶಭರಿತರಾಗಿ ನುಡಿದರು.
ಅಂತವರ ಬಗ್ಗೆ ನಾನು ಯಾವತ್ತು ತಲೆ ಕೆಡಿಸಿಕೊಳ್ಳುವುದಿಲ್ಲ, ಕಾರಣ ನೀವು ನನಗೆ ಹೆತ್ತ ತಾಯಿಯಂತೆ ನಾನು ನಿಮ್ಮನ್ನು ನಂಬಿದ್ದೇನೆ. ತಾಯಿ ಹಾಲು ಎಂದಾದರೂ ವಿಷ ಆಗಲು ಸಾಧ್ಯವೇ ಎಂದರು, ನಿಮಗೆ ಸಾಲ ನೀಡಲು ಅಡ್ಡಿಪಡಿಸುವಂತವರ ಕುಟುಂಬಗಳಿಗೆ ಭಗವಂತ ಚೆನ್ನಾಗಿ ಇಟ್ಟಿರಲಿ ಎಂದು ಆಶಿಸಿದ ಅವರು ನೀವು ಪ್ರಾಮಾಣಿಕವಾಗಿ ಸಾಲ ಮರುಪಾವತಿಸಿ ಎಂದು ಮನವಿ ಮಾಡಿದರು. ಸಂಘದ ಪ್ರತಿಯೊಬ್ಬ ಸದಸ್ಯರಿಗೆ 50 ಸಾವಿರ ಬದಲಿಗೆ ನಿಮಗೆ 1 ಲಕ್ಷರೂಗಳನ್ನು ನೀಡುತ್ತಿರುವುದು ಪ್ರವಾಸ ಹೋಗುವುದಕ್ಕೆ ಅಲ್ಲ. ಹೈನುಗಾರಿಕೆ ಸೇರಿದಂತೆ ಗೃಹ ಕೈಗಾರಿಕೆ ಮಾಡಿಕೊಂಡು ಸ್ವಾಲಬನೆಯ ಜೀವನ ಮಾಡಿ ತಮ್ಮ ಕುಟುಂಬ ನಿರ್ವಹಣೆ ಮಾಡಿಕೊಳ್ಳುವಷ್ಟು ಮಟ್ಟಕ್ಕೆ ಬೆಳೆಯಬೇಕು ಎಂದು ಕರೆ ಇತ್ತರು.
ನನಗೆ ನನ್ನ ಕುಟುಂಬ ಚಿಂತೆ ಇಲ್ಲ,ನೀರಿನದೆ ಚಿಂತೆ
ನನ್ನ ಇಬ್ಬರು ಮಕ್ಕಳಿಗೆ ಮದುವೆಯಾಗಿದ್ದು, ಅವರು ಆರಾಮಾಗಿ ಇದ್ದಾರೆ. ಹೀಗಾಗಿ ನನಗೆ ಬೇರೆ ಯಾವುದೇ ಆಲೋಚನೆಗಳಿಲ್ಲ. ಮಲಗಿದರೂ, ಎದ್ದರೂ
ನನಗೆ ನೀರಿನದ್ದೇ ಚಿಂತೆಯಾಗಿದೆ. ಕೆಸಿವ್ಯಾಲಿ ಜತೆಗೆ ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಗೆ ನೀರು ಯಾವಾಗ ಬರುತ್ತದೆ ಎನ್ನುವ ಕಾತುರ ನನ್ನಲ್ಲಿದೆ. ಸರಕಾರಿ ಭೂಮಿಗಳಲ್ಲಿ ಹುಲ್ಲು ಬೆಳೆದು ನಿಮ್ಮ ಹಸುಗಳಿಗೆ ಹುಲ್ಲು ಸಿಗುವಂತಾಗಬೇಕು ಅಂತಹ ಆಸೆ ಕಾಡುತ್ತಿದೆ ಬಡವರ ಪರ ನಾನು ಇರುವುದರಿಂದ ನನ್ನ ಪರವಾಗಿ ನೀವಿದ್ದೀರಿ ಎನ್ನುವ ಆಶಾಭಾವನೆ ನನ್ನಲ್ಲಿದೆ ಎಂದರು.

ವಿವಿಧ ಮಹಿಳಾ ಸ್ವಸಾಹಾಯ ಸಂಘದ ಸದಸ್ಯರು

ಕೇವಲ ಎಸ್ಸಿ, ಎಸ್ಟಿಗಳಿಗೆ ಮಾತ್ರವಲ್ಲದೆ ಎಲ್ಲ ವರ್ಗದ ರೈತರಿಗೂ ಕೊಳವೆಬಾವಿಗಳನ್ನು ಕೊರೆಯಿಸಲು 1 ತಿಂಗಳಲ್ಲೇ ಚಾಲನೆ ನೀಡಲಾಗುವುದು, ನಾನು ಪಕ್ಷ , ಜಾತಿಗಳನ್ನು ದಾಟಿ ಬಂದಿರುವುದರಿಂದ ಎಲ್ಲರೂ ನನಗೆ ಸಮಾನರೇ ಎಂದ ಅವರು ಬೇರೆ ಬೇರೆ ಯೋಜನೆಗಳನ್ನು ಡಿಸಿಸಿ ಬ್ಯಾಂಕ್ ಮೂಲ ನೀಡಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಹೇಳಿದರು, ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ. ಕೊಟ್ಟ ಮಾತಿಗೆ ತಪ್ಪುವುದಿಲ್ಲ, ತಪ್ಪಿದರೆ ಈ ಭೂಮಿಯ ಮೇಲೆಯೇ ಉಳಿಯಲ್ಲ ಎಂದ ಅವರು, ದೇವರ ಪೂಜೆ ಮಾಡಿದರೆ ಪುಣ್ಯ ಬರಲ್ಲ, ಜನರ ಕೆಲಸ ಮಾಡಿದರೆ ಪುಣ್ಯ ಬರುತ್ತದೆ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ವೇಮಗಲ್ ವ್ಯಾಪ್ತಿಯ ಉರಿಗಿಲಿ ಗ್ರಾಮವನ್ನು ಸಾಲವಿತರಣೆ ಮಾಡುವ ಸಲುವಾಗಿ ಸುಗಟೂರು ವ್ಯಾಪ್ತಿಗೆ ಸೇರಿಸಲಾಗಿದೆ. ಸಾಲ ಮರುಪಾವತಿ ವಿಚಾರದಲ್ಲಿ ಸುಗಟೂರು ಹಾಗೂ ಹೋಳೂರು ಹೋಬಳಿಯಲ್ಲಿ ಯಾರೊಬ್ಬರೂ ನಂಬಿಕೆ ಕಳೆದುಕೊಂಡಿಲ್ಲ. ನಮ್ಮ ಮೇಲೆ ಈ ಹಿಂದೆ ದೂರು ಕೊಟ್ಟವರೇ ಈಗ ನಿಮ್ಮನ್ನು ನೋಡಿ ಕಲಿಯಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಅನಿಲ್‍ಕುಮಾರ್, ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್, ಎಪಿಎಂಸಿ ಮಾಜಿ
ಅಧ್ಯಕ್ಷ ಕೃಷ್ಣಪ್ಪ ಮುಖಂಡರಾದ ತಿಮ್ಮರಾಯಪ್ಪ, ನವೀನ್‍ಬಾಬು, ವೆಂಕಟರಾಮರೆಡ್ಡಿ, ಕೃಷ್ಣೇಗೌಡ, ವಿಶ್ವನಾಥ್, ಭಾಸ್ಕರ್, ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!