ಬರಗಾಲದಲ್ಲಿ ಅಂತರ್ಜಲ ಹೆಚ್ಚಿಸಲು ಕೆಸಿ ವ್ಯಾಲಿಯಿಂದ ನೀರು ಬಿಡುಗಡೆ ರಮೇಶ್ ಕುಮಾರ್.

ಕೋಲಾರ:-ಬರದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ ಕೆಸಿವ್ಯಾಲಿ ಯೋಜನೆಯಡಿ ನೀರು ಹರಿಸಲಾಗುತ್ತಿದೆ. ಈ ಬಗ್ಗೆ ಅನೇಕರು ಅರಿವಿಲ್ಲದೆ ನೀರನ್ನು ನೇರವಾಗಿ ಬಳಸಿಕೊಳ್ಳಲು ಮುಂದಾಗಿರುತ್ತಾರೆ ಇದನ್ನು ಬಳಸದಂತೆ ಒಳ್ಳೆಯ ಮಾತಲ್ಲಿ ಹೇಳಿ ಎಂದು ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಅವರು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ನೂತನ ಸಂಸದ ಮುನಿಸ್ವಾಮಿಯೊಂದಿಗೆ ಸಭೆ ನಡೆಸಿ ಮಾತನಾಡಿದರು
ಕೆಸಿವ್ಯಾಲಿ ಯೋಜನೆಯಡಿ ನೀರು ಹರಿಯುತ್ತಿರುವ ಭಾಗದಲ್ಲಿ ಕೆಲವರು ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಮಾಹಿತಿ ನೀಡಿದ ತಹಸೀಲ್ದಾರ್ ಗಾಯಿತ್ರಿ ಅವರನ್ನು ತರಾಟೆಗೆ ತೆಗೆದುಕೊಂಡು,ನೀವು ಖುರ್ಚಿಯಿಂದ ಏಳದೆ ಇಲ್ಲಿಯೇ ಕುಳಿತರೆ ಹೇಗೆ, ಮೊದಲು ಸ್ಥಳಕ್ಕೆ ಭೇಟಿ ನೀಡಿ. ಮುಲಾಜಿಲ್ಲದೆ ಪಂಪ್, ಮೋಟಾರು ಜಪ್ತಿಮಾಡಿಕೊಳ್ಳಿ ಎಂದು ಗರಂ ಆಗಿ ಹೇಳಿದರು.ಕರ್ನಾಟಕದಲ್ಲಿ ನತದೃಷ್ಠ ಜಿಲ್ಲೆ ಕೋಲಾರ. 14 ವರ್ಷ ಸತತ ಬರಗಾಲ ಅನುಭವಿಸಿದ್ದಾರೆ ಜನರು ಈಗ ಪರಿಸರದ ಮಾತು ಬಿಟ್ಟು ಜನರು ಬದುಕಲು ನೀರು ನೀಡುವುದಷ್ಟೇ ಇಲ್ಲಿ ಮುಖ್ಯ ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.‘ಕೆಸಿವ್ಯಾಲಿ ಯೋಜನೆ ನೀರು ಹರಿಯುತ್ತಿರುವ ಪ್ರದೇಶದಲ್ಲಿ ನೀರನ್ನು ನೋಡಿರದ ಜನರು ತಮಗೆ ಇಟ್ಟುಕೊಂಡು ಬಿಡಬೇಕು ಎನ್ನುವ ನಿಟ್ಟಿನಲ್ಲಿ ಕೆಲವರು ಪಂಪ್, ಮೋಟರ್ ಬಳಸಿಕೊಳ್ಳುವುದು, ಇಡುವಳಿ ಜಮೀನಿನಲ್ಲಿ ಹಳ್ಳಗಳನ್ನು ತೋಡುವ ಕೆಲಸಕ್ಕೆ ಮುಂದಾಗಿದ್ದಾರೆ. ಹಾಗೆ ಮಾಡಬಾರದು ಇಡೀ ಜಿಲ್ಲೆಗಾಗಿ ಅನುಷ್ಟಾನಗೊಳಿಸಿರುವ ಯೋಜನೆಯನ್ನು ಒಂದೇ ಕಡೆ ಅಥಾವ ಒಂದೇ ಊರಿಗೆ ಬಳಸಿಕೊಳ್ಳುವುದು ಸರಿಯಲ್ಲ ಎಂದರು.
ತಾಲ್ಲೂಕಿನ ಪೆರ್ಜೇನಹಳ್ಳಿ ಕೆರೆಯಿಂದ ಎಸ್‌. ಅಗ್ರಹಾರ ದೊಡ್ಡ ಕೆರೆಗೆ ನೀರು ಹರಿಯಲಿದ್ದು, ಈ ಮಧ್ಯೆ ಆರೇಳು ಚೆಕ್‌ ಡ್ಯಾಂ ತುಂಬ ಬೇಕಿದೆ. ಇದರಿಂದ ಕೆರೆ ತುಂಬಲು 6-7 ವಾರಗಳು ಕಾಲಾವಕಾಶ ಬೇಕಾಗುತ್ತದೆ’ ಎಂದು ತಿಳಿಸಿದರು.
‘ಈಗ ಚಿಲ್ಲಪ್ಪನಹಳ್ಳಿ, ಮುದುವಾಡಿ ಹಾಗೂ ಎಸ್.ಅಗ್ರಹಾರ ಕೆರೆಗಳಿಗೆ ನೀರು ಹರಿಯುವ ಮೊದಲು ಆ ಕೆರೆಗಳನ್ನು ಸ್ವಚ್ಛಪಡಿಸಲು ಹಾಗೂ ಒತ್ತುವರಿಯಾಗಿರುವುದನ್ನು ತಡೆಯಲು ಫೆನ್ಸಿಂಗ್ ಮಾಡಬೇಕಾಗಿದೆ ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ವಹಿಸಬೇಕು ಎಂದು ಸೂಚಿಸಿದರು.

ಕರಾವಳಿಯಲ್ಲಿ ನೀರಿಲ್ಲ ಎಂದು ಎತ್ತಿನ ಹೊಳೆ ಯೋಜನೆಗೆ ತಾಳೆ ಹಾಕುವುದು ಸರಿಯಲ್ಲ.
ಮಂಗಳೂರು ಭಾಗದಲ್ಲಿ ನೀರಿಲ್ಲ ಎನ್ನುವ ವಿಚಾರವನ್ನು ಪ್ರಚಾರ ಮಾಡುತ್ತ ಇದನ್ನು ಎತ್ತಿನಹೊಳೆ ಯೋಜನೆಗೂ ತಾಳೆಹಾಕುತ್ತ ಉತ್ಪ್ರೇಕ್ಷೆಯಾಗಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಸರಿಯಲ್ಲ ಎಂದು ವಿಧಾನಸಭಾಕ್ಷ ರಮೇಶ್‌ ಕುಮಾರ್ ಸುದ್ದಿಗಾರರೊಂದಿಗೆ ಹೇಳಿದರು.
ನಿಸರ್ಗದಲ್ಲಿ ಆಗುವ ಬದಲಾವಣೆಗೂ ನೀರಾವರಿ ಯೋಜನೆಗೂ ಯಾವುದೇ ರಿತಿಯ ಸಂಬಂಧವಿಲ್ಲ, ಆದರೂ ಕೆಲವರು ಬೇಕಂತಲೇ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು. ‘ಎತ್ತಿನಹೊಳೆಗೆ ಸಂಬಂಧಿಸಿದಂತೆ ಆ ಭಾಗದಲ್ಲಿ ವಿರೋಧ ವ್ಯಕ್ತವಾಗಿದ್ದು ನಿಜ. ಅವರೂ ನಮ್ಮ ಸಹೋದರರೆ ಅವರ ಮನವೊಲಿಸಲಾಗಿದೆ ಅವರುಗಳ ಸಹಕಾರ ಸಿಗುತ್ತಿದೆ. ‘ಕರಾವಳಿ ಭಾಗದಲ್ಲಿ ಬೀಳುವಂತಹ ಮಳೆ ಸುಮಾರು 450 ಟಿಎಂಸಿ ನೀರು ಅರಬ್ಬೀಸಮುದ್ರದ ಪಾಲಾಗುತ್ತಿದೆ ಇದು 65 ವರ್ಷಗಳ ಇತಿಹಾಸದ ಅಂಕಿಅಂಶಗಳನ್ನು ಸಂಗ್ರಹಿಸಿದ ಅಧಾರದಲ್ಲಿ ಅಂದಾಜಿಸಿರುವುದು.ಇದರ ಹಿನ್ನಲೆಯಲ್ಲಿ ಸಕಲೇಶಪುರದ ಸಮೀಪ ಅಂದಾಜು 35 ಟಿಎಂಸಿ ಲಭ್ಯವಾಗಲಿದೆ ಎನ್ನುವುದು ತಿಳಿದುಬಂದಿದ್ದು, ಅಲ್ಲಿ ಹರಿದುಹೋಗುವ ನೀರಿಗೆ ಅಡ್ಡಲಾಗಿ ಗೋಡೆಯನ್ನು ಕಟ್ಟಿ ನಮ್ಮ ಭಾಗಕ್ಕೆ ಬೇಕಾಗುವ 24 ಟಿಎಂಸಿ ನೀರನ್ನು ಬಳಸಿಕೊಳ್ಳುತ್ತಿದ್ದೇವೆ’ ಎಂದು ವಿವರಿಸಿದರು.
ಎತ್ತಿನಹೊಳೆ ಕಾಮಗಾರಿ ಅತಿವೇಗವಾಗಿ ಕೆಲಸ ನಡೆಯುತ್ತಿದೆ. ಜೂ.11ರಂದು ಸ್ಥಳ ಪರಿಶೀಲನೆಗೆ ತೆರಳುತ್ತಿದ್ದೇವೆ. ತಿಪಟೂರು, ಚಿಕ್ಕನಾಯನಕನಹಳ್ಳಿ ಶಾಸಕರಿಗೆ ಇದ್ದ ಅನುಮಾನಗಳನ್ನು ಬಗೆಹರಿಸಲಾಗಿದೆ’ ಎಂದರು.

ವೈರಲ್ ಆಗಿರುವ ಸರ್ಕಾರಕ್ಕೆ ಬರೆದಿರುವ ಪತ್ರ, ನಾನು ಬರೆದಿಲ್ಲ
ಸರ್ಕಾರದ ವಿರುದ್ಧ ಪತ್ರ ಬರೆದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಚಾರಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯಿಸಿದ ಅವರು ನಾನು ಯಾರಿಗೂ ಯಾವುದೇ ಪತ್ರ ಬರೆದಿಲ್ಲ ಎಂದರು. ನನ್ನ ಭಾಗದ ಜನರ ನೀರಿನ ಸಮಸ್ಯೆ ಕುರಿತಾಗಿ ಎತ್ತಿನಹೊಳೆ, ಕೆಸಿವ್ಯಾಲಿ, ಅರಣ್ಯ ಇಲಾಖೆ, ರೈತರ ಈ ವಿಚಾರವಾಗಿ ಮಾತನಾಡಿದ್ದೇನೆ ಅಷ್ಟೇ. ರಾಜಕಾರಣಕ್ಕೂ ನನಗೂ ಸಂಬಂಧವಿಲ್ಲ ಎಂದರು.

ವರದಿ.ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!