ಸಮಾಜ ಅಸ್ಪೃಶ್ಯತೆಯ ರೋಗದಿಂದ ಮಲೀನವಾಗಿದೆ ಚಿಂತಕ ಕೋಟಗಾನಹಳ್ಳಿರಾಮಯ್ಯ ಕಳವಳ.

ಕೋಲಾರ: ಸಮಾಜ ಅಸ್ಪೃಶ್ಯತೆಯ ರೋಗದಿಂದ ಮಲೀನವಾಗಿದೆ, ಮಲೀನ ರಕ್ತವನ್ನು ಶುದ್ಧೀಕರಿಸುವ ಹೃದಯ ವಿಫಲವಾಗಿ ಸುಮಾರು ಇಪತೈದು ವರ್ಷಗಳೇ ಕಳೆದುಹೋಗಿದೆ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಕಳವಳದಿಂದ ಹೇಳಿದರು. ಅವರು ಕೋಲಾರದ ಪತ್ರಕರ್ತರ ಭವನದಲ್ಲಿ ಬುಡ್ಡಿದೀಪ ಪ್ರಕಾಶನ ವತಿಯಿಂದ ಹಮ್ಮಿಕೊಂಡಿದ್ದ ಮನೆ ಮನೆಗೆ ಅಂಬೇಡ್ಕರ್, ಎಂಬ ದುಂಡುಮೇಜಿನ ಸಂವಾದ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಆದ್ದದ್ದು ಮಹಾ ನದಿಯ ಉಗಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವಿಂದು ಇರುವ ಮನೆ ಆರ್ಯ ಧರ್ಮಕ್ಕೆ ಅನುಗುಣವಾಗಿ ಕಟ್ಟಿದ್ದು. ಮೋದಿಯ ಹಿಂದುತ್ವದ ಭೂತ ಆವರಿಸಿರುವ, ಪರಿವಾರದ ಅಂಕಣವಾಗಿ, ಮನೆಯೂ ರಾಜಕೀಯದ ತರಬೇತು ಶಾಲೆಯಾಗಿರುವ, ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳುವ ವ್ಯವಸ್ಥೆಯಲ್ಲಿ ನಾವು ಇದ್ದಿವಿ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದಲೇ ಇಡಬೇಕು ಎಂದು ನುಡಿದರು. ಕೋಲಾರದ ಈ ನೆಲದಲ್ಲಿ ದಲಿತ ಸಮಾಜದ ಮೊದಲ ಪಾದ ನಚಿಕೇತನ ನಿಲಯದಲ್ಲಿ ನಮ್ಮಂತಹ ನೂರಾರು ಮಂದಿಗೆ ದಲಿತ ಪ್ರಜ್ಞೆಯನ್ನು ಮೂಡಿಸಿದೆ. ಇಂದು ತಲುಪಿರುವ ಸ್ಥಿತಿಯನ್ನು ಕಂಡರೆ ಬೇಸರವಾಗುತ್ತದೆ. ದಲಿತ ಪ್ರಜ್ಞೆ ಇಂದು ರುದ್ರಭೂಮಿಯವರೆಗೆ ಬಂದು ನಿಂತಿದೆ, ಮುಂದಿರುವ ಅಪಾಯಗಳ ಬಗ್ಗೆ ಸಮುದಾಯಕ್ಕೆ ಹೇಳುವುದು ನುಡಿಕಾರರ ಕರ್ತವ್ಯವೆಂದು ಹೇಳಿದರು.
ಮಹಾ ನದಿಯ ಉಗಮ ಪುಸ್ತಕದ ಕುರಿತು ಮಾತನಾಡಿದ ಚಿಂತಕ ಸಿ.ಜಿ. ಲಕ್ಷ್ಮೀಪತಿ ಮಾತನಾಡಿ, ಅಂಬೇಡ್ಕರ್ ಅವರನ್ನು ಬಿಟ್ಟು ಬೇರೆಬೇರೆಯವರು ನಮ್ಮ ಮನೆಯನ್ನು ಸೇರಿದ್ದಾರೆ. ಮನೆ, ಮನಸ್ಸಿನಲ್ಲಿ ಬೇಡದ ವಿಚಾರ ತುಂಬಿಕೊಂಡಿದೆ. ಇದರ ನಿರ್ಮೂಲನೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಲಹೆ ನೀಡಿದರು. ಡಾ.ಬಿ.ಆರ್. ಅಂಬೇಡ್ಕರ್ ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಿದ್ದಾರೆ ಎನ್ನುವ ವಿಚಾರದಲ್ಲಿ ಎಲ್ಲರಿಗೂ ಸಹಮತವಿದೆ. ಅಲ್ಲಿಂದ ಆಚೆ ಏನು ಎಂಬುದು ತಿಳಿದಿಲ್ಲ. ಅಂಬೇಡ್ಕರ್ ಬಗ್ಗೆ ಮಾತಿಗಷ್ಟೇ ಸೀಮಿತವಾಗಿದ್ದಾರೆಯೇ ವಿನಃ ಮನೆ, ಮನಸ್ಸಿನಲ್ಲಿ ಇಲ್ಲ. ಅವರ ಆಶಯಗಳು ವಿಚಾರಗಳು ಆಚರಣೆಯಲ್ಲಿ ಬಂದಿಲ್ಲ ಎಂದು ವಿಷಾಧಿಸಿದರು.ನಿತ್ಯ ಜೀವನದಲ್ಲಿ ಅಂಬೇಡ್ಕರ್ ಅವರನ್ನು ಅಳವಡಿಸಿಕೊಳ್ಳಬೇಕೆಂಬುದು ಮುಖ್ಯ. ಜಾತಿವಾದದ ಬಗ್ಗೆ ನಂಬಿಕೆ ಉಳ್ಳವರು ಅಂಬೇಡ್ಕರ್‍ವಾದಿಯಾಗಲು ಸಾಧ್ಯವಿಲ್ಲ.ಅಂಬೇಡ್ಕರ್ ನಮ್ಮ ಹೃದಯದ ಬಂಡವಾಳ ಆಗಬೇಕೇ ವಿನಃ ಆರ್ಥಿಕ ಬಂಡವಾಳ ಆಗಬಾರದು. ಅಂಬೇಡ್ಕರ್ ಸಮಾಜ ಹೇಗಿರಬೇಕೆಂದು ಬಯಸಿದ್ದರೋ ಅದನ್ನು ಮನೆಮನೆಗೆ ತಿಳಿಸುವ ಕೆಲಸ ಆಗಬೇಕು ಎಂದು ತಿಳಿಸಿದರು. ಬೆಂಗಳೂರಿನ ಬಿ.ಆರ್.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕಿ ಕೆಸ್ತಾರ, ಹೈ ಕೋರ್ಟ್ ನ್ಯಾಯವಾದಿ ಎಚ್.ಮೋಹನ್ ಕುಮಾರ್, ಲೇಖಕ ಪ್ರೊ.ಎಂ.ನಾರಾಯನಸ್ವಾಮಿ, ಕೋಲಾರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಡಿ.ಡೋಮಿನಿಕ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನಾಗಾನಂದ ಕೆಂಪರಾಜ್, ಆರ್‍ಪಿಐ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ಬೆಳಮಾರನಹಳ್ಳಿ ಆನಂದ್, ಕಸಾಪ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಜೆ.ಜಿ.ನಾಗರಾಜ್ ಇದ್ದರು.


Leave a Reply

Your email address will not be published. Required fields are marked *

Don`t copy text!